General

ಅಮ್ಮನಿಗೊಂದು ಪತ್ರ

ಸಿ.ಜಿ.ವೆಂಕಟೇಶ್ವ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು

ಪ್ರೀತಿಯ ಅಮ್ಮ …

ಅಮ್ಮ ನಿನ್ನ ಹೆಸರೇ ನನಗೆ ಶ್ರೀರಕ್ಷೆ ,ನಮ್ಮ ಹಳ್ಳಿಯ ಸುತ್ತ ಮುತ್ತ ನಾನೆಂದರೆ ಅಷ್ಟು ಯಾರಿಗೂ ತಿಳಿದಿರಲಿಲ್ಲ ಶ್ರೀದೇವಮ್ಮನವರ ಮಗ ಎಂದರೆ ಎಲ್ಲರಿಗೂ  ಓ ಶ್ರೀದೇವಮ್ಮನ ಮಗನೇ ಎಂದು ಒಂದು ರೀತಿಯ ವಿಶೇಷಾಧಾರಿತವಾದ ಗೌರವ ನೀಡುವುದು ನೋಡಿ ಅಮ್ಮಾ ನಾನು ನಿನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ . ನಾನು ೬ ವರ್ಷದ ಮಗುವಾಗಿದ್ದಾಗ ನನ್ನ ತಂದೆ ತೀರಿಕೊಂಡರು ಆಗ ನನ್ನನು ತಂದೆ ತಾಯಿ‌ಎರಡೂ ಆಗಿ‌ನೀನು ಬೆಳೆಸಿದ ರೀತಿ ಅನನ್ಯ. ಮನೆಯಲ್ಲಿ ತುತ್ತಿಗೆ ತತ್ವಾರವಿದ್ದರೂ ಕೂಲಿ ನಾಲಿ ಮಾಡಿ ನನ್ನ ನೀ ಬೆಳೆಸಿದೆ ಥೇಟ್  ಲಂಕೇಶರ ಕವನದ  ಅವ್ವನಂತೆ ಬದುಕಿ ನಮಗಿಂದು ಒಂದು ನೆಲೆ ಕಲ್ಪಿಸಿದೆ .ಆ ಕವನದಲ್ಲಿ ಬರುವಂತೆ ನೀನೆಂದಿಗೂ ಹೊಸ ಬಟ್ಟೆಗಳನ್ನು ಆಸೆ ಪಡಲಿಲ್ಲ, ಬಂಗಾರ ಕೇಳಲೇಇಲ್ಲ ನಮ್ಮಪ್ಪ ಮಾಡಿದ ಆಸ್ತಿ ಮಾರಲಿಲ್ಲ ಬದಲಿಗೆ ಕೂಲಿ‌ಮಾಡುತ್ತಲೇ ನನ್ನ ಸಾಕುತ್ತಲೇ ನಮ್ಮ ಆಸ್ತಿ ಇನ್ನೂ ಹೆಚ್ಚಸಿದೆ ನೀನು ತಿಳಿದಿರಬಹುದು ಅಮ್ಮ ನನ್ನ ಮಗ ಆಸ್ತಿಯನ್ನು ಇಷ್ಟಪಡುವನೆಂದು ,ನಿನ್ನ ಮುಂದೆ ಆ ಆಸ್ತಿ ನನಗೆ ತೃಣ ಅಮ್ಮಾ ನಿನೇ ನನ್ನ ಪ್ರಾಣ . ನಾನು ಹದಿನೈದನೇ ವರ್ಷದ ಬಾಲಕನಾಗಿದ್ದಾಗ ನನಗೆ ಆರೋಗ್ಯ ಕೆಟ್ಟಾಗ ೨ ಕಿಲೋಮೀಟರಗಿಂತ ಹೆಚ್ಚು ನನ್ನನ್ನು ಚಿಕ್ಕ ಮಗುವಿನಂತೆ …ಕಂಕುಳಲ್ಲಿ ಎತ್ತಿಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆ ನಿನ ತ್ಯಾಗ ಹೇಗೆ ಮರೆಯಲಿ ಅಮ್ಮ .ನಿನ್ನ ಆಶೀರ್ವಾದದಿಂದ ನಾಲ್ಕು ಮಕ್ಕಳಿಗೆ ವಿದ್ಯೆ ಹೇಳಿಕೊಡುವ ಮಟ್ಟಕ್ಕೆ ಬಂದಿದ್ದೇನೆ . ಇದೆಲ್ಲಾ ನೀನು ಕೊಟ್ಟ ಜೀವನ ಅಮ್ಮ
ಜಗಕೆ ಕೂಗಿ ಹೇಳುವೆ 
ಜಗತ್ತಿನ ಶ್ರೇಷ್ಠ ಅಮ್ಮ ನನ್ನಮ್ಮ
ಈ ಕವನ ನಿನಗೆ ಅರ್ಪಿತ ಅಮ್ಮ


*ಎಲ್ಲಾ ಜನ್ಮಕೂ ತಾಯಾಗು*

ನನ್ನ ಹೊತ್ತು ಹೆತ್ತ ಅಮ್ಮ ನೀನು
ನಿನ್ನಾಸರೆಯಲಿ ಕರುವು ನಾನು
ಸಹಿಸಿದೆ ನೂರು ನೋವುಗಳ
ಸರಿಸಿದೆ ಬದುಕಿನ  ಕಷ್ಟಗಳ|೧|


ಹಗಲಿರುಳು ದುಡಿದೆ ನನಗೆ 
ಮರೆತೆಬಿಟ್ಟೆ  ನಿನ್ನ ಏಳಿಗೆ 
ಉಡಲಿಲ್ಲ ಉಣಲಿಲ್ಲ ನೀನು
ಉಡಿಸಿ ಉಣಿಸಿ ಸಂಭ್ರಮಿಸಿದೆ|೨|

ದಾರಿ ತಪ್ಪಿದಾಗ ತಿದ್ದಿ ತೀಡಿದೆ 
ಭಾರೀ ಪ್ರೀತಿಯ ಧಾರೆಯೆರೆದೆ 
ಬೆಳೆಸಿದೆ ನನ್ನಲಿ ಸಂಸ್ಕಾರ 
ನಿನ್ನ ‌ಹಾರೈಕೆಯ ರೀತಿ ಸುಂದರ|೩|

ಬೆಲೆ ಕಟ್ಟಲಾಗದು ನಿನ್ನ ತ್ಯಾಗಕೆ 
ನೆಲೆ ನೀಡಿದೆ ನನ್ನ  ಬದುಕಿಗೆ 
ಚಿಂತೆಯೆಲ್ಲವನೀಗ ನೀಗು 
ಎಲ್ಲಾ ಜನ್ಮಕು ತಾಯಿ ನೀನಾಗು|೪|

Leave a Reply